ಕಾವಿಟ್ಟಿಗೆ

   ಅಧಿಕ ಉಷ್ಣತೆಯಲ್ಲಿ (15000-16000ಸೆ) ಕರಗದ, ಲೋಹ ಮತ್ತು ಗಾಜಿನ ಕೈಗಾರಿಕೆಯಲ್ಲಿ ವಿಶೇಷ ಉಪಯೋಗದಲ್ಲಿರುವ ಇಟ್ಟಿಗೆ (ರಿಫ್ರಾಕ್ಟೊರಿ, ಫೈರ್‍ಬ್ರಿಕ್). ಇದನ್ನು ತಯಾರಿಸುವ ಮಣ್ಣಿನಲ್ಲಿ ಕೆಲವು ಖನಿಜಗಳಿರಬೇಕು. ಅವುಗಳಲ್ಲಿ ಮುಖ್ಯವಾದವು: 1 ಜಲ ಸಂಯುಕ್ತವಾದ ಅಲ್ಯೂಮಿನಿಯಂ ಸಿಲಿಕೇಟ್ 2 ಅಲ್ಯೂಮಿನಿಯಂ ಹೆಚ್ಚಾಗಿರುವ ಬಾಕ್ಸೈಟ್ ಮತ್ತು ಕಯನೈಟ್ 3 ಸಿಲಿಕದಿಂದ ಕೂಡಿರುವ ಮರಳು ಮತ್ತು ಹೆಚ್ಚಾಗಿರುವ ಕ್ವಾರ್ಟ್ಸೈಟ್ 4 ಮ್ಯಾಗ್ನಸೈಟ್, ಡಾಲೊಮೈಟ್ ಮುಂತಾದ ಮೆಗ್ನೀಸಿಯಂ ಇರುವ ಖನಿಜಗಳು 5 ಕ್ರೋಮೈಟ್ 6 ಗ್ರಾಫೈಟ್ ಅಥವಾ ಕೋಕಿನ ರೂಪದಲ್ಲಿ ಇಂಗಾಲ 7 ಪರ್ಮಿಕ್ಯಾಲೈಟ್ ಮೈಕ. ಇವಲ್ಲದೆ ಝಿರ್ಕೋನಿಯ ಥೋರಿಯ, ಬೆರಲಿಯ, ವೈಟೇನಿಯ ಮೊದಲಾದ ಚಿಲ್ಲರೆ ಖನಿಜಗಳೂ ಸೇರಿರುತ್ತವೆ. ಈ ರೀತಿ ತಯಾರಿಸಿದ ಉಷ್ಣನಿರೋಧ ಇಟ್ಟಿಗೆ. 

 ಸಾಧಾರಣವಾದ ಇಟ್ಟಿಗೆಗಳಲ್ಲಿ ಮಾಡುವ ಹಾಗೆ ಈ ಮಣ್ಣನ್ನು ಸಿದ್ಧಪಡಿಸಿದ ಮೇಲೆ ಅದರಿಂದ ಇಟ್ಟಿಗೆಗಳನ್ನು ಅವುಗಳ ಉಪಯೋಗಕ್ಕೆ ಅನುಸಾರವಾಗಿ ಎರಡು ಮೂರು ವಿಧಗಳಲ್ಲಿ ತಯಾರಿಸುತ್ತಾರೆ. ಆಮೇಲೆ ಇವನ್ನು ಕ್ಲುಪ್ತವಾದ ಉಷ್ಣತೆಯಲ್ಲಿ ಒಣಗಿಸುತ್ತಾರೆ. ಒಣಗಿದ ಇಟ್ಟಿಗೆಗಳನ್ನು ಎಣ್ಣೆ ಇಲ್ಲವೇ ಅನಿಲದಿಂದ ಉರಿಯುವ ಸುರಂಗದ ಒಲೆಗಳಲ್ಲಿ ಸುಡುತ್ತಾರೆ. ಮ್ಯಾಗ್ನಸೈಟ್, ಡಾಲೊರೈಟ್ ಮುಂತಾದ ಖನಿಜಗಳನ್ನು ಆವರ್ತಕವಾದ ಒಲೆಗಳಲ್ಲಿ ಮತ್ತೆ ಸುಡಬೇಕಾಗುತ್ತದೆ.

 ಹೆಚ್ಚಿನ ಉಷ್ಣತೆಯನ್ನು ತಡೆಯಬೇಕಾದರೆ ಇಟ್ಟಿಗೆಗಳನ್ನು ಮಾಡುವಾಗ ಕಚ್ಚಾ ಸಾಮಾಗ್ರಿಗಳನ್ನು ವಿದ್ಯುತ್ತಿನ ಕುಲುಮೆಗಳಲ್ಲಿ ಕರಗಿಸಿ ವಿಶಿಷ್ಟವಾದ ಅಚ್ಚುಗಳಲ್ಲಿ ಎರಕ ಹೊಯ್ಯಬೇಕು, ಕರಗಿಸಿದ ಅಲ್ಯೂಮಿನ, ಮುಲ್ಗೈಟ್ ಮತ್ತು ಝಿರ್ಕೋನಿಯಾದ ಇಟ್ಟಿಗೆಗಳು ಏನನ್ನೂ ಹೀರುವುದಿಲ್ಲ. ಕರಗಿ ನೀರಾದ ಗಾಜನ್ನೂ ತಡೆದುಕೊಳ್ಳುತ್ತವೆ. ವಿದ್ಯುತ್ತಿನ ಕುಲುಮೆಗಳಲ್ಲಿ ಪೆಟ್ರೋಲಿಯಮ್, ಕೋಕ್ ಮತ್ತು ಮರಳಿನ ಪ್ರತಿಕ್ರಿಯೆಯಿಂದ ಸಿಲಿಕನ್ ಕಾರ್ಬೈಡ್ ಎಂಬ ಅಧಿಕೋಷ್ಣತಿಯನ್ನು ತಡೆಯುವ ಪದಾರ್ಥ ಬರುತ್ತದೆ. ಇದನ್ನು ಪುಡಿಮಾಡಿ ಬಂಧಿಸುವ ಸಾಮಗ್ರಿಯೊಂದಿಗೆ ಬೆರೆಸಿ ಅಚ್ಚುಗಳಲ್ಲಿ ಎರಕಹೊಯ್ದು ಸುರಂಗದ ಒಲೆಗಳಲ್ಲಿ  ಸುಟ್ಟು ಕಾವಿಟ್ಟಿಗೆಗಳನ್ನು ತಯಾರಿಸುತ್ತಾರೆ.

 ಒಳ್ಳೆಯ ಕಾವಿಟ್ಟಿಗೆಗಳಲ್ಲಿ ಕೆಳಗೆ ಕಂಡ ಗುಣಗಳಿರಬೇಕು: 1 ಕಾವನ್ನು ತಡೆಯಬೇಕು; 2 ಕರಗಿದ ಗಾಜು, ಲೋಹಗಳು, ಕಿಟ್ಟಗಳು ಮತ್ತು ಲವಣಗಳು ಅವನ್ನು ಕೊರೆಯಬಾರದು; 3 ಸಾಮನ್ಯ ಉಷ್ಣತೆಯಲ್ಲಿ ಬಲಿಷ್ಠವಾಗಿರಬೇಕು. ವಿಶೇಷ ಉಷ್ಣತೆಯಲ್ಲಿ, ತೂಕ ಬಿದ್ದಾಗ ವಿಕಾರವಾಗಬಾರದು; 4 ಸವೆದುಹೋಗಬಾರದು.

ಕಾವಿಟ್ಟಿಗೆಗಳನ್ನು ಮೂರು ಬಗೆಯಾಗಿ ವರ್ಗೀಕರಿಸಬಹುದು: 1 ಆಮ್ಲ, 2 ಕ್ಷಾರ, 3 ಎರಡೂ ಅಲ್ಲದ್ದು. ಸಿಲಿಕ ಇಟ್ಟಿಗೆ ಮೊದಲನೆಯ ವರ್ಗಕ್ಕೂ ಮ್ಯಾಗ್ನಸೈಟಿನ ಮಿಶ್ರಣದಿಂದ ಮಾಡಿದ ಇಟ್ಟಿಗೆಗಳಲ್ಲಿ ಎರಡು ಗುಣಗಳನ್ನು ಕಾಣಬಹುದು. ಎರಡೂ ಅಲ್ಲದ ನಮೂನೆ ಹೆಚ್ಚಾಗಿ ಬಳಕೆಯಲ್ಲಿಲ್ಲ. ಕಾವಿಟ್ಟಿಗೆಗಳು. ಯಾವ ಉಷ್ಣತೆಯಲ್ಲಿ ಮೆತ್ತಗಾಗಿ ಆಕಾರವನ್ನು ಬದಲಾಯಿಸುತ್ತವೆ. ಎಂಬುದು ಮುಖ್ಯ. ಸಾಮಾನ್ಯವಾದ ಇಟ್ಟಿಗೆಗಳು ಸೆಂಟಿಗ್ರೇಡ್ 15000 ರಿಂದ 16000 ಸೆ. ಗಳಲ್ಲಿಯೂ ಒಳ್ಳೆಯವು 17500 ಸೆ. ಗಳಲ್ಲಿಯೂ ದ್ರವನಗೊಳ್ಳುವುದಿಲ್ಲ. ಅಲ್ಯೂಮಿನಿಯಮ್ ಆಕ್ಸೈಡಿನ ಪ್ರಮಾಣ ಹೆಚ್ಚಿದಷ್ಟೂ ಹೆಚ್ಚು ಉಷ್ಣತೆಯನ್ನು ಇಟ್ಟಿಗೆಗಳು ತಡೆದುಕೊಳ್ಳುತ್ತವೆ. ಇನ್ನೂ ಹೆಚ್ಚಿನ ಉಷ್ಣತೆ ಇರುವ ಕಡೆ-ಇಂಗಾಲ ಮತ್ತು ಸಿಲಿಕನ್ ಕಾರ್ಬೈಡಿನ ಇಟ್ಟಿಗೆಗಳನ್ನು ಉಪಯೋಗಿಸಬೇಕು.

ಕರಗಿ ನೀರಾದ ಕಿಟ್ಟದ ಸಂಬಂಧದಲ್ಲಿರುವ ಕಾವಿಟ್ಟಿಗೆಗಳು ರಾಸಾಯನಿಕಗಳ ಪ್ರತಿಕ್ರಿಯೆನ್ನು ತಡೆಯುವಂತಿರಬೇಕು. ಕ್ಷಾರದ ತೆರೆದ ಒಲೆಯಲ್ಲಿ ಉಕ್ಕನ್ನು ಮಾಡುವ ಕ್ಷಾರದ ಕಾವಿಟ್ಟಿಗೆಗಳನ್ನು ಉಪಯೋಗಿಸುತ್ತಾರೆ. ಕಾವಿಟ್ಟಿಗೆಯ ಗೋಡೆಕಾವಿಗೆ ಸಿಕ್ಕಿದಾಗ ಅದರ ಮುಖದಿಂದ ಚಕ್ಕೆಗಳು ಏಳುವುದುಂಟು. ಕಾದಾಗ ಹಿಗ್ಗುವುದು ಕಡಿಮೆಯಾದರೆ ಚಕ್ಕೆಗಳು ಏಳುವ ಸಂಭವ ಕಡಿಮೆ.

ಕಬ್ಬಿಣದ ಮತ್ತು ಉಕ್ಕಿನ ಕೈಗಾರಿಕೆಯಲ್ಲಿ ಕಾವಿಟ್ಟಿಗೆಗಳನ್ನು ಊದುಕುಲುಮೆ ಬೆಸೆಮರ್ ಕುಲುಮೆ, ತೆರೆದ  ಒಲೆಗಳು ಮತ್ತು ವಿದ್ಯುತ್ತಿನ ಕುಲುಮೆಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ತೆರೆದ ಒಲೆಯಲ್ಲಿ ಮ್ಯಾಗ್ನಸೈಟ್, ಕ್ರೋಮ್ ಸಿಲಿಕ, ಬೆಂಕಿಯನ್ನು ತಡೆಯುವ ಮಣ್ಣು ಮತ್ತು ಅವಾಹಕ ಇಟ್ಟಿಗೆಗಳನ್ನು ಉಪಯೋಗಿಸುತ್ತಾರೆ. ಒಲೆಯ ಮುಂಭಾಗದ ಮತ್ತು ಹಿಂಭಾಗದ ಗೋಡೆಗಳ ಮಾಡನ್ನೂ ಸಿಲಿಕದ ಇಟ್ಟಿಗೆಗಳಿಂದ ಕಟ್ಟುತ್ತಾರೆ. ಸಿಲಿಕ ಮತ್ತು ಮ್ಯಾಗ್ನಸೈಟ್ ಇಟ್ಟಿಗೆಗಳು ಒಂದಕ್ಕೊಂದು ತಗಲಿದ್ದರೆ ಉಷ್ಣತೆ ಹೆಚ್ಚಿದಾಗ ರಾಸಾಯನಿಕ ಪ್ರತಿಕ್ರಿಯೆಯಿಂದ ಕರಗುವ ಸಂಭವವಿರುವುದರಿಂದ ಎರಡಕ್ಕೂ ನಡುವೆ ಒಂದು ವರಸೆ ಕ್ರೋಮ್ ಇಟ್ಟಿಗೆಯನ್ನಿಡುತ್ತಾರೆ.  ಎರಕದ ಲೋಹದ ಕಾರ್ಖಾನೆಯಲ್ಲಿ ಎರಕದ ಕಬ್ಬಿಣ, ಕಬ್ಬಿಣದ ಚೂರುಪಾರು, ಸುಣ್ಣಕಲ್ಲು ಮತ್ತು ಉಕ್ಕನ್ನು ಸೇರಿಸಿ ಕರಗಿಸಬೇಕಾಗಿರುವುದರಿಂದ ಕ್ಯಾಫೋಲದ ಒಳಗಡೆ ಕಾವಿಟ್ಟಿಗೆಯ ಅಂಚನ್ನು ಕಟ್ಟಬೇಕು. ತಾಮ್ರ, ಸತು, ಸೀಸ, ನಿಕ್ಕಲ್ ಮತ್ತು ಅಲ್ಯೂಮಿನಿಯಮ್ ಲೋಹಗಳ ಕೈಗಾರಿಕೆಯಲ್ಲಿಯೂ ಕಾವಿಟ್ಟಿಗೆಯ ಉಪಯೋಗ ವಿಶೇಷವಾಗಿದೆ. ಗಾಜಿನ ತಯಾರಿಕೆಯಲ್ಲಂತೂ ಕಾವಿಟ್ಟಿಗೆಯನ್ನು ಬಿಟ್ಟರೆ ನಡೆಯುವುದೇ ಇಲ್ಲ. ಅದರ ತಯಾರಿಕೆಯಲ್ಲಿ ಬಳಸುವ ಸೋಡ-ಬೂದಿ, ಸೋಡಿಯಂ ಸಲ್ಫೇಟ್, ಸುಣ್ಣ ಮತ್ತು ಬೊರ್ಯಾಕ್ಸ್ ಇವು ಅತಿಯಾದ ಉಷ್ಣತೆಯಲ್ಲಿ ಸಾಮಾನ್ಯವಾದ ಕಾವಿಟ್ಟಿಗೆಗಳನ್ನೇ ತಿಂದುಹಾಕುತ್ತವೆ. ಅದಕ್ಕಾಗಿ ಸಿಲಿಕ ಹೆಚ್ಚಾಗಿರುವ ವಿಶೇಷ ರೀತಿಯ ಇಟ್ಟಿಗೆ, ಕಯನೈಟ್ ಮತ್ತು ಕರಗಿಸಿದ ಅಲ್ಯುಮಿನದ ಇಟ್ಟಿಗೆಗಳಿಂದ ಗಾಜನ್ನು ಕರಗಿಸುವ ಕ್ಯಾಫೋಲಗಳಿಗೆ ಅಂಚುಗಳನ್ನು ಕಟ್ಟುತ್ತಾರೆ. ಸುಣ್ಣ ಮತ್ತು ಸಿಮೆಂಟಿನ ಒಲೆಗಳಲ್ಲಿ ಮ್ಯಾಗ್ನೆಸೈಟಿನ ಇಟ್ಟಿಗೆಗಳಿಂದ ಅಂಚುಗಳನ್ನು ಕಟ್ಟುತ್ತಾರೆ. 

ಕಾವಿಟ್ಟಿಗೆಯ ಕೈಗಾರಿಕೆಯಲ್ಲಿ ಎಲ್ಲ ಉದ್ದೇಶಗಳಿಗೂ ಉಪಯೋಗವಾದ ನಮೂನೆಗಳಿಗೆ ಬದಲಾಗಿ ಒಂದೊಂದಕ್ಕೂ ಪ್ರತ್ಯೇಕವಾದ ಮಾದರಿಗಳು ತಯಾರಾಗುತ್ತವೆ. ಇದರ ಫಲವಾಗಿ ಕುಲುಮೆಗಳಲ್ಲಿ ಉಷ್ಣತೆ ಹೆಚ್ಚಿ ದಕ್ಷತೆ ಏರುತ್ತಿದೆ. ಮೇಲ್ಮಟದ ಕಾವಿಟ್ಟಿಗೆಗಳಿಗೆ ಉತ್ತೇಜನ ದೊರೆಯುತ್ತಿದೆ. ಪರಮಾಣು ಶಕ್ತಿಯಲ್ಲಿ ಉಪಯೋಗಿಸುವ ವಿದ್ಯುಜ್ಜನಕಗಳಲ್ಲಿ ವಿಶಿಷ್ಟವಾದ ಕಾವಿಟ್ಟಿಗೆಗಳು ಬೇಕಾಗುತ್ತವೆ. ಈ ಸಾಮಗ್ರಿಗಳು ಮಿತಿಮೀರಿದ ಉಷ್ಣತೆಯಲ್ಲಿ ಭೌತವಾಗಿಯೂ ರಾಸಾಯನಿಕವಾಗಿಯೂ ಭದ್ರವಾಗಿರಬೇಕು. ಈ ದಿಕ್ಕಿನಲ್ಲಿ ಹೊಸ ಸಂಶೋಧನೆಗಳು ಈಗಲೂ ನಡೆಯುತ್ತಿವೆ.

(ಎಚ್.ಸಿ.ಕೆ.)

(ಪರಿಷ್ಕರಣೆ: ಹೆಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ